ಹೆಸರಿಗೆ ತಕ್ಕಂತೆ "ರಾಣಿ"ಯಾಗಿಯೇ ಬೆಳೆದಿದ್ದ ಗೋವು ತನ್ನ 5ನೇ ವರ್ಷದ ಪ್ರಾಯದಲ್ಲಿಯೇ ಕೊನೆಯುಸಿರೆಳೆಯಬೇಕಾಗಿ ಬಂದಿತು. ತೀರ್ಥಹಳ್ಳಿಯ ಹೊರವಲಯದಲ್ಲಿರುವ ಆಚೆಬೆಟ್ಟಮಕ್ಕಿ ಟೈಲರ್ ಯೋಗೇಶ್ ಅವರ ಮನೆಯ "ರಾಣಿ" ಎಂಟೂವರೆ ತಿಂಗಳ ಗರ್ಭಿಣಿಯಾಗಿದ್ದಾಗ ಇದ್ದಕ್ಕಿದ್ದಂತೆ ಹೊಟ್ಟೆಯುಬ್ಬರ ಕಂಡು ಮೇವು ಬಿಟ್ಟಿತು. ಒಂದೇ ದಿನದಲ್ಲಿ ನೆಲ ಹಿಡಿದ ರಾಣಿ ಮತ್ತೆಂದೂ ಮೇಲೇಳಲು ಸಾಧ್ಯವಾಗಲಿಲ್ಲ. ಹೊಟ್ಟೆಯನ್ನು ಒತ್ತಿನೋಡಿದರೆ ಕಲ್ಲು ಮುಟ್ಟಿದ ಅನುಭವ . ನಗರ ಪ್ರದೇಶದಲ್ಲಿ ಮೇಯುವ ಜಾನುವಾರಿನ ಉದರದಲ್ಲಿ ಘನತ್ಯಾಜ್ಯಗಳಾದ ಪ್ಲಾಸ್ಟಿಕ್ ಮತ್ತು ಲೋಹದ ತುಂಡುಗಳಿರದೆ ಮತ್ತೇನಿರಲು ಸಾದ್ಯ ಹೇಳಿ..ಅನಿವಾರ್ಯವಾಗಿ ಅವದಿ ತುಂಬದ ಕರುವಿಗೆ ಜನ್ಮ ನೀಡಬೇಕಾಗಿ ಬಂದ ರಾಣಿ ಮಾತ್ರ ಚೇತರಿಸಿಕೊಳ್ಳಲೇ ಇಲ್ಲ. ಆಹಾರ ಸೇವನೆ ಸಂಪೂರ್ಣವಾಗಿ ನಿಲ್ಲಿಸಿಬಿಟ್ಟಿತಲ್ಲದೆ ತನ್ನ ಹಿಂಬದಿಯ ಕಾಲುಗಳು ಸ್ವಾದೀನ ಕಳೆದುಕೊಂಡವು.ಕುತ್ತಿಗೆಯ ರಕ್ತನಾಳಗಳು ಊದಿಕೊಂಡು ಹೃದಯಕ್ಕೂ ತಂತಿಯಂತಹ ಚೂಪಾದ ಲೊಹವು ಚುಚ್ಚಿ ಸೋಂಕು ಹರಡಿರುವುದು ಖಾತ್ರಿಯಾಗತೊಡಗಿತು. ಬಹುಅಂಗಾಂಗ ವೈಪಲ್ಯಕ್ಕೆ ಒಳಗಾದ ರಾಣಿಯ ನರಳಾಟಕ್ಕೆ ನನ್ನ ಕೈಯಾರ ಮುಕ್ತಿದೊರಕಿಸಿದೆ. ನಂತರ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ನಿರೀಕ್ಷೆಯಂತೆಯೇ ಘನತ್ಯಾಜ್ಯಗಳಾದ ಪ್ಲಾಸ್ಟಿಕ್ ಮತ್ತು ಹೃದಯವನ್ನು ಉದರದ ಮುಖಾಂತರ ಸ್ಪರ್ಶಿಸಿದ್ದ ತಂತಿಯನ್ನು ಹೊರತೆಗೆದು ಸಾರ್ವಜನಿಕರಲ್ಲಿ ಮಾಹಿತಿ ನೀಡುವ ಸಲುವಾಗಿ ನಿಮ್ಮ ಮುಂದಿಟ್ಟಿರುವೆ.
ಇದು ರಾಣಿಯೊಬ್ಬಳ ನೋವಿನ ಕಥೆಯಲ್ಲ. ಪಟ್ಟಣ ಪ್ರದೇಶದ 3-4 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮೇಯಲು ಬರುವ ಎಲ್ಲಾ ಗೋವುಗಳದ್ದೂ ಇದೇ ಪರಿಸ್ಥಿತಿಯೇ ಆಗಿದೆ . ಹೊಟ್ಟೆಯಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ನಂತಹ ಘನ ತ್ಯಾಜ್ಯ ಹೊತ್ತು ನರಳುತ್ತಾ ದಿನ ಮುಂದೂಡುತ್ತಿರುವ ಇವುಗಳ ಮೂಕ ರೋದನೆಯನ್ನು ಅರಿಯುವನೇ ಮನುಜ? ಬಹುಶಃ ಇದು ಕಷ್ಟ ಸಾಧ್ಯ . ಕೊನೆಯ ಪಕ್ಷ ಪಟ್ಟಣದ ಸುತ್ತಮುತ್ತ ಜಾನುವಾರು ಸಾಕಾಣಿಕೆ ಮಾಡುವವರು ಅವುಗಳನ್ನು ಮನೆಯಲ್ಲಿಯೇ ಕಟ್ಟಿ ಸಾಕುವುದೇ ಶಾಶ್ವತ ಪರಿಹಾರವಾಗಬಲ್ಲದು.
ಮಾಹಿತಿ
✍ಡಾ ಯುವರಾಜ ಹೆಗಡೆ
ಪಶುವೈದ್ಯರು, ತೀರ್ಥಹಳ್ಳಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ